ಡೆಲ್ಟ ಲೋಹ -
	ತಾಮ್ರ 55%, ಸತು 41% ಮತ್ತು ಕಬ್ಬಿಣ 4% ಇರುವ ಮಿಶ್ರಲೋಹ.  ಬೆಂಕಿಯಲ್ಲಿ ಕಾಸಿ ಬಡಿದು ಆಕಾರ ಕೊಡಬಹುದು.  ಸುರುಳಿಯಾಗಿಸಬಹುದು ಮತ್ತು ದ್ರವೀಕರಿಸಿ ಎರಕ ಹೊಯ್ಯಬಹುದು.  ತಾಂತ್ರಿಕ ಉಪಯೋಗಗಳು ಹಲವು. ಘರ್ಷಣೆಯಾಗುವ ಯಂತ್ರಭಾಗಗಳಾಗಿ ಮತ್ತು ಕವಾಟುಗಳಾಗಿ ಉಪಯೋಗವಿದೆ. ಅಚ್ಚು ಯಾವ ಭಾಗಕ್ಕೆ ಉಜ್ಜಿಕೊಂಡು ತಿರುಗುತ್ತದೆಯೋ ಆ ಪ್ರದೇಶದಲ್ಲಿನ ಅಚ್ಚಿನ ಭಾಗವಾಗಿ ಬಳಸುತ್ತಾರೆ. ಹಡಗನ್ನು ಮುಂದೆ ಹೋಗುವಂತೆ ಮಾಡುವುದಕ್ಕಾಗಿ ಒಂದು ನಿರ್ದಿಷ್ಟ ಕೋನದಲ್ಲಿ ಕೆಳಕೊನೆಯಲ್ಲಿ ಅಳವಡಿಸಿದ ಮತ್ತು ತಿರುಪಿನ ಸುತ್ತುಗಳಂತೆ ತಿರುಚಿದ ಅಲಗುಗಳುಳ್ಳ ಭಾಗದಲ್ಲಿ, ಸುತ್ತು ತಿರುಗುವ ಚಾಲಕದಂಡಗಳಲ್ಲಿ ಡೆಲ್ಟ ಲೋಹದ ಉಪಯೋಗವಿದೆ.
(ವಿ.ಜಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ